ಬಿಳಿ ಬೆಲ್ಲದ ಕಪ್ಪು ಕಥೆ! (The dark story of the white jaggery!)

ಮನೆಗೆ ನೆಂಟರಿಷ್ಟರು ಬಂದರೆಂದರೆ ಅವರನ್ನು ಬಗೆಬಗೆಯ ಊಟೋಪಚಾರಗಳಿಂದ ಸತ್ಕರಿಸುವುದು ನಮ್ಮ ಸಂಪ್ರದಾಯ. ಇಂತಹ ಒಂದು ಸತ್ಕಾರ್ಯದೊಂದಿಗೆ ನಮಗೆ ತಿಳಿಯದೆಯೇ ಒಂದು ಅಚಾತುರ್ಯ ನಡೆದುಹೋಗುವುದು ನಮ್ಮ ಗಮನಕ್ಕೆ ಬರುವುದೇ ಇಲ್ಲ. ಇದೇನಿದು ಎಂದು ಚಿಂತಿಸುತ್ತಿದ್ದೀರಾ ? ಹಾಗಿದ್ದರೆ ಈ ಅಂಕಣವನ್ನು ತಪ್ಪದೇ ಓದಿರಿ.

ನೆಂಟರಿಷ್ಟರಿಗೆ ಸಹಜವಾಗಿಯೇ ಸಿಹಿಯೂಟ ಉಣಿಸುವುದು ನಮ್ಮೆಲ್ಲರಿಗೆ ಪ್ರಿಯವಾದ ಕೈಂಕರ್ಯ. ಇಂತಹ ಸಮಯದಲ್ಲಿ ಬೆಲ್ಲದ ಪ್ರಯೋಗ ಸಹಜವೇ. ಆದ್ದರಿಂದ ಈ ಬೆಲ್ಲದ ಕಥೆಯನ್ನು ನೀವು  ನಿಮ್ಮ ಕಿವಿಯಾರೆ ಕೇಳಿರಿ!

“ಅಧಿಕ ಇಳುವರಿ, ಅಧಿಕ ಲಾಭ ಎಂಬ ಹುಚ್ಚು ಕುದುರೆಯ ಹಿಂದಿನ ಓಟದಲ್ಲಿ ಮನುಷ್ಯ,ನನ್ನ ತಾಯಿಯಾದ ಕಬ್ಬಿಗೆ, ವಿಜ್ಞಾನದ ಹೆಸರಿನಲ್ಲಿ ಉಣಿಸದ ವಿಷವಿಲ್ಲ. ವಿಷಪ್ರಾಶನದ ನಂತರ ನನ್ನ ತಾಯಿ ಕಟಾವಿಗೆ  ಸಿದ್ಧಳಾಗುತ್ತಾಳೆ. ತಾಯಿಗಷ್ಟೇ ಸೀಮಿತವಾಗದ ಈ ವಿಷಪ್ರಾಶನ ಮತ್ತೂ ಮುಂದುವರೆದು ಅವಳ ಮಕ್ಕಳಾದ ನನ್ನ ಹಾಗೂ ನನ್ನ ತಂಗಿ ಸಕ್ಕರೆಗೂ ಉಣಿಸಲಾಗುತ್ತದೆ. ದುರಾಸೆಯ ಗೂಡಾಗುತ್ತಿರುವ ಮನುಷ್ಯ ನಮಗೂ ಒಳಿತು ಮಾಡದೆ, ಇತರ ಮನುಷ್ಯರಿಗೂ ಅನ್ಯಾಯ ಮಾಡುತ್ತಿದ್ದಾನೆ. ಈ ಅನ್ಯಾಯಕ್ಕೆ ಕೊನೆ ಯಾವಾಗ?

ಕಬ್ಬಿನ ರಸದಿಂದ ನನ್ನ ಹುಟ್ಟು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಕಬ್ಬಿನರಸವನ್ನು ಕಾಯಿಸಿ, ಪಾಕ ಬರಿಸಿ ಅಚ್ಚುಗಳಲ್ಲಿ ಹಾಕಿ ನನಗೆ ಆಕಾರವನ್ನು ಕೊಡುತ್ತಾರೆ. ಅಚ್ಚು ಕಟ್ಟುವ ಪಾಕ ತಯಾರಾಗಲು ಸ್ವಲ್ಪ ಸುಣ್ಣವನ್ನು ಬೆರೆಸಲಾಗುತ್ತದೆ. ಎಷ್ಟೆಂದರೆ ಒಂದು ಟನ್ ಕಬ್ಬಿಗೆ(ಸುಮಾರು ೪೦೦ ಲೀಟರ್ ರಸಕ್ಕೆ) 1೧೦ ಗ್ರಾಂನಷ್ಟು. ಇಷ್ಟು ಹಾಕಿದರೆ ಸಾಕು ಆರೋಗ್ಯಕರವಾದ , ಪರಿಸರ ಸ್ನೇಹಿಯಾದ,  ಬಳಕೆಗೆ ಯೋಗ್ಯವಾದ ನಾನು ತಯಾರಾಗುತ್ತೇನೆ. ಆದರೆ ನನ್ನ ನಿಜವಾದ ಬಣ್ಣ ಕಪ್ಪು! ಹಾಗೆಂದು ನನ್ನನ್ನು ಹಲವರು ದೂರವಿರಿಸುವ ಪ್ರಯತ್ನ ಮಾಡುತ್ತಾರೆ. ಬಣ್ಣ ಕಪ್ಪಾದರೇನು ಗುಣ ತಾನೇ ಮುಖ್ಯ?ಅದನ್ನರಿಯದ ಮೂರ್ಖನಾಗುತ್ತಿದ್ದಾನೆ ಮನುಜ. ಅದು ಅವನ ದುರದೃಷ್ಟ! ಬಲಿತ ಕಬ್ಬನ್ನು ಹಾಗೆಯೇ ಇಡಲಾಗುವುದಿಲ್ಲ. ಹಾಗಾಗಿ ವರ್ಷ ಪೂರ್ತಿ ಇರುವ ನನ್ನನ್ನು ತಯಾರಿಸುವ ತಂತ್ರಜ್ಞಾನವನ್ನು ಮನುಷ್ಯ ಕಂಡುಹಿಡಿದಿದ್ದಾನೆ. ನನ್ನ ಬಣ್ಣ ಕಪ್ಪಾದರೂ ಬಹಳ ಸಿಹಿಯಾದ ರುಚಿ!

ನಮ್ಮ ದೇಶ ಭಾರತವನ್ನು ಹಲವರು ಆಳಿಹೋದರು. ಅದರಲ್ಲಿ ಬಿಳಿಯರ ಪ್ರಭಾವ ನಮ್ಮ ಮೇಲೆ ಬಹಳ ಹೆಚ್ಚು. ಆದ್ದರಿಂದಲೋ ಏನೋ ನಮ್ಮ ಜನಕ್ಕೆ ಬಿಳಿಯ ಬಣ್ಣ ಬಹಳ ಅಚ್ಚು ಮೆಚ್ಚು! ಅದರ ಪ್ರಭಾವ ನಮ್ಮ ಮೇಲೂ ಉಂಟಾಗುತ್ತಿದೆ. ಮನುಷ್ಯ ನನ್ನ ಸಹಜ ಬಣ್ಣವಾದ ಕಪ್ಪನ್ನು ಬಿಳಿಯಾಗಿಸಲು ಕಸರತ್ತು ನಡೆಸುತ್ತ ಬಂದಿದ್ದಾನೆ. ಇದರೊಂದಿಗೆ ಅವನ ಬುದ್ಧಿ ಕಪ್ಪಾಗುತ್ತಾ ಬಂದಿತು ಎಂದರೆ ಅತಿಶಯೋಕ್ತಿಯೇನಲ್ಲ. ನನ್ನ ಬಣ್ಣ ಬಿಳಿಯಾಗಲು ಹಲವಾರು ನಿರ್ಣಾಯಕ ಅಂಶಗಳು ಕೆಲಸ ಮಾಡುತ್ತವೆ.ಕಬ್ಬಿನ  ತಳಿ, ಬೆಳೆಯುವ ಭೂಮಿ, ಋತು, ಗೊಬ್ಬರ ಇತ್ಯಾದಿ.

ಕಬ್ಬಿನ ಸಿಪ್ಪೆಯ ಮೇಲೆ ಸಹಜವಾಗಿ ಬೂದಿ ಮೆತ್ತಿರುತ್ತದೆ. ಇದನ್ನು ಮಡ್ಡಿ ಎನ್ನುತ್ತಾರೆ. ಇದು ಕಬ್ಬಿನ ಹಾಲಿನಲ್ಲಿಯೂ ಉಳಿದಿರುತ್ತದೆ. ಇದರಿಂದ ನನ್ನ ರುಚಿ, ಬಣ್ಣ ಎರಡೂ ಕೆಡುತ್ತದೆ. ಹಾಗಾಗಿ, ಇದನ್ನು ಸುಲಭವಾಗಿ ತೆಗೆಯಲು ಒಂದು ಕೊಪ್ಪರಿಗೆಗೆ ೫೦ಗ್ರಾಮ್ ನಷ್ಟು ಅಡಿಗೆ ಸೋಡಾ  ಹಾಕಿದರೆ ಅನುಕೂಲಕರ ಎಂದು ಉಪಯೋಗಿಸುತ್ತಾರೆ. ಆದರೆ ದುಷ್ಟ ಮಾನವ ೫೦೦ ಗ್ರಾಂಗಳಿಗೂ ಮಿಗಿಲಾಗಿ ಬಳಸುತ್ತಾನೆ. ಇದರಿಂದ ಯಜಮಾನನಿಗೆ ಮಡ್ಡಿ ತೆಗೆಯಲು ಸುಲಭವಾಗುತ್ತದೆ ಜೊತೆಗೆ ಇಳುವರಿಯೂ ಹೆಚ್ಚುತ್ತದೆ. ಪಾಕ ಉಬ್ಬುತ್ತದೆ. ಹಾಗಾಗಿ ಒಂದು ಕೊಪ್ಪರಿಗೆಗೆ ಸಾವಿರದ ಇನ್ನೂರೈವತ್ತು  ಅಚ್ಚಿನ ಬದಲು ಸಾವಿರದ ಐನೂರು ಅಚ್ಚು ಸಿದ್ಧವಾಗುತ್ತದೆ. ಅಂಗಾರಾಮ್ಲ(ಸೋಡಾ) ಮನುಷ್ಯರ ಉದರ ಸೇರುತ್ತದೆ! ಅಂಗಾರಾಮ್ಲವನ್ನು ಸದಾ ಹೊರಹಾಕಲು ಶ್ರಮಿಸುವ ಶ್ವಾಸಕೋಶ, ಹೃದಯಗಳಿಗಿದು ಹೊರೆಯಾಗದೇ? ಸ್ವಾಮಿ ಕಾರ್ಯ ಸ್ವಕಾರ್ಯ ಎರಡೂ ಕಾರಣಗಳಿಗಾಗಿ ನನಗೆ ಉಣಿಸುವ ವಿಷಗಳ ಪಟ್ಟಿ ಬಹಳ ದೊಡ್ಡದು!

 1. ಹೈಡ್ರಸ್ (ಸೋಡಿಯಂ ಹೈಡ್ರೋ ಸಲಫಯ್ಡ್ ) – ಇದರ ಬಳಕೆ ಇಲ್ಲದಿದ್ದರೆ ನನ್ನ ಬಣ್ಣ ಬಿಳುಪಾಗಲು ಸಾಧ್ಯವೇ ಇಲ್ಲ.  ಇದನ್ನು ಒಂದು ಅಡಿಗೆಗೆ ೫೦೦ಗ್ರಾಮ್ ಗಿಂತಲೂ ಹೆಚ್ಚು ಬಳಸುತ್ತಾರೆ. ಇದನ್ನು ಹೆಚ್ಚಾಗಿ ಕಾರ್ಖಾನೆಗಳಲ್ಲಿ ಮಾತ್ರ ಬಳಸಲಾಗುತ್ತದೆ. ಕೆಲವೊಮ್ಮೆ ಆಹಾರ ಸಂರಕ್ಷಣೆಗಾಗಿಯೂ(preservative)  ಬಳಸಲಾಗುತ್ತದೆ. ಆದರೆ ಹೆಚ್ಚು ಹಣ ವೆಚ್ಚ ಮಾಡಲಿಚ್ಚಿಸದ, ಪದಾರ್ಥಗಳ ಒಳಿತು ಕೆಡುಕುಗಳ ಜ್ಞಾನವಿಲ್ಲದ ಬಡರೈತರು ಕಡಿಮೆ ವೆಚ್ಚದ, ಕಾರ್ಖಾನೆಗಳಲ್ಲಿ ಬಳಸಬಹುದಾದ ಈ ರಾಸಾಯನಿಕವನ್ನು ನನಗೆ ಉಣಬಡಿಸುತ್ತಾರೆ.
 2. ಚಕ್ಕೆಗಳು ಮತ್ತು ಗಂ ಎಂಬ ಬಿಳಿಯ ಬಣ್ಣದ ಪುಡಿಗಳು. ಇದರ ರಾಸಾಯನಿಕ ಹೆಸರುಗಳನ್ತೂ ನನಗೆ ತಿಳಿದಿಲ್ಲ. ಆದರೆ ಇವುಗಳ ಬೆಲೆಯಂತೂ ಹೆಚ್ಚೆಂದು ಮಾತ್ರ ಗೊತ್ತು. ಕೇವಲ ಮೂರುಗ್ರಾಂನಷ್ಟು ವಿಷವನ್ನು ಮಿತವಾಗಿ ಬಳಸುವ ಮನುಷ್ಯರ ಸಂಯಮಕ್ಕೆ ಮೆಚ್ಚಲೇ ಬೇಕಲ್ಲವೇ?
 3. ಪಾಕ ಮಾಡುವಾಗ ಕೊಪ್ಪರಿಗೆ ಸೀದುಹೋಗದಂತೆ ಮಾಡಲು ಯಾವುದಾದರೂ ಜಿಡ್ಡಿನ ಬಳಕೆ ಮಾಡುತ್ತಾರೆ. ಅದಕ್ಕಾಗಿ ಪಾಮ್ ಎಣ್ಣೆ, ಕೊಬ್ಬರಿ ಎಣ್ಣೆ, ಸೂರ್ಯಕಾಂತಿ ಎಣ್ಣೆ  ಹೀಗೆ ಯಾವುದಾದರೂ ಒಂದು ಎಣ್ಣೆಯನ್ನು ಒಂದು ನೂರು ಮಿಲಿಯಷ್ಟು ಹಾಕುವರು. ಇಲ್ಲಿ ಯಾವುದಾದರೂ ಎಂಬ ಪದಕ್ಕೆ ಬಹಳ ಮಹತ್ವ ಉಂಟು. ಅದು ಇಂಜಿನ್ ಎಣ್ಣೆಯಾದರೂ ಆಶ್ಚರ್ಯವೇನಿಲ್ಲ.
 4. ನಮ್ಮ ರೈತರು ಟಿ.ವಿಯಿಂದ ಬಹಳ ಪ್ರಭಾವಿತರಾಗಿದ್ದಾರೆ. ಬಿಳಿ ಮಾಡುವ ಕ್ರಿಯೆಯಲ್ಲಿ ನಿರ್ಮಾ ಪುಡಿಯೋ ಅಥವಾ ಬ್ಲೀಚಿಂಗ್ ಪುಡಿಯೋ ಅಥವಾ ಎರಡೂ ಒಟ್ಟಿಗೆಯೋ ಬಳಸುವುದರಿಂದ ಲಾಭ ಹೆಚ್ಚೆಂದು ಅರಿತಿದ್ದಾರೆ. ಹಾಗಾಗಿ ನನ್ನ ತಯಾರಿಕೆಯಲ್ಲಿ ಇದನ್ನೂ ಬಳಸುತ್ತಾರೆ!ಎಲ್ಲೆಲ್ಲೋ ಏನೇನೋ ತಿಂದು ಹೊಟ್ಟೆ ಕೆಡಿಸಿಕೊಂಡಿರುವವರು ಇವನ್ನು ಬೆರೆಸಿದನನ್ನ ಒಂದು ತುಂಡು ತಿಂದರೆ ಸಾಕು!ಅಲ್ಲವೇ?
 5. “ಅಧಿಕ ಇಳುವರಿಯಿಂದ ಮಾತ್ರ ದೇಶದ ಉದ್ಧಾರ ಸಾಧ್ಯ”ಎಂಬ ನಮ್ಮ ಆರ್ಥಿಕ ಹಿತಚಿಂತಕರ ಧ್ಯೇಯವಾಕ್ಯವನ್ನು ಬಾಯಿಪಾಠ ಮಾಡಿರುವ ನಮ್ಮ ರೈತರು ನನ್ನ ತಯಾರಿಕೆಯಲ್ಲೂ  ಯೂರಿಯಾ, ಸೂಪರ್ ಫಾಸ್ಫೇಟ್, ಪೊಟಾಷ್ಗಳನ್ನು ನನ್ನೊಂದಿಗೆ ಬೆರೆಸುತ್ತಾರೆ. ಹೆಚ್ಚು ಇಳುವರಿಗಾಗಿ ಏನು ಮಾಡಿದರು ತಪ್ಪಲ್ಲ ಎಂಬುದು ಅವರ ಮತ.
 6. ಇನ್ನು ನನ್ನ ತೂಕ  ಹೆಚ್ಚಿಸಲು ಜಿಪ್ಸಂ ನ ಬಳಕೆ! ಸಾಮಾನ್ಯವಾಗಿ ಕಡಲೇಕಾಯಿಯ ತೂಕ  ಹೆಚ್ಚಿಸಲು ಜಿಪ್ಸಂನ ಬಳಕೆ ಮಾಡುತ್ತಾರೆ. ಇದನ್ನು ಬೆಲ್ಲದ ತಯಾರಿಕೆಯಲ್ಲೂ ವರ್ಗಾಯಿಸಿರುವ ನಮ್ಮ ರೈತರ ಬುದ್ಧಿಮತ್ತೆ ಯನ್ನು ನಾವು ಮೆಚ್ಚಲೇ ಬೇಕು. ಅಲ್ಲಿಗೆ ವಿಜ್ಞಾನಿಗಳಿಗೆ ಒಂದು ಜವಾಬ್ದಾರಿ  ಕಡಿಮೆಯಾದಂತಾಯಿತು!
 7. ಎಲ್ಲಾ ಜೀವಿಗಳೂ ಅನ್ಯರನ್ನು ಗಮನಿಸುತ್ತಾ ಬಹಳ ಕಲಿಯುತ್ತವೆ! ಹಲವು ಬಾರಿ ಅಚ್ಚು ಸರಿಯಾಗಿ ಬರುವುದಿಲ್ಲ. ಗಟ್ಟಿಮುಟ್ಟಾದ ಮನೆಗಳ ರಹಸ್ಯ  ಸಿಮೆಂಟ್ ಎಂಬುದನ್ನು ಗಮನಿಸುತ್ತಾ ಬಂದಿರುವ ಅವನು ನನ್ನ ಮೇಲೂ ಅದನ್ನೇಪ್ರಯೋಗ ಮಾಡುತ್ತಿದ್ದಾನೆ!  ಕೇಳಿ! ಸಂತೋಷ ಪಡಿ! ಈಗ ಮಾರುಕಟ್ಟೆಯಲ್ಲಿ ನನ್ನ ಬೆಲೆ ಏರುತ್ತದೆ! ನಿಮ್ಮ ಹೊಟ್ಟೆ ಸಾಯುತ್ತದೆ ಎಚ್ಚರ!
 8. ನನ್ನ ತಯಾರಿಕೆಯಲ್ಲಿ ಸಾವಯವ ಪದಾರ್ಥಗಳನ್ನು ಬಳಸಿ ನಮ್ಮ ರೈತರು ಒಂದು ರೀತಿಯ ಸಮನ್ವಯ ನೀತಿಯನ್ನು ಪಾಲಿಸುತ್ತಿದ್ದಾರೆ. ನನ್ನ ಮೇಲೆ ಇಷ್ಟೊಂದು ಪ್ರಯೋಗ ನಡೆಸಿರುವ ನಮ್ಮ ರೈತರೂ ವಿಜ್ಞಾನಿಗಳೇ! ಮೇಲೆ ತಿಳಿಸಿದ ರಾಸಾಯನಿಕಗಳೊಂದಿಗೆ ಕಾಡು ತೊಂಡೆ ಸೊಪ್ಪು, ಕಾಡು ಬೆಂಡೆ ಸೊಪ್ಪುಗಳನ್ನೂ ಕಬ್ಬಿನೊಂದಿಗೆ ಗಾಣಕ್ಕೆ ಕೊಟ್ಟರೆ ನನ್ನ  ಬಿಳುಪಿಗೆ, ತೂಕಕ್ಕೆ ಅನುಕೂಲವಾಗುತ್ತದನ್ತೆ.
 9. ಆಗಾಗ  ಬೂದಿಯ ಬಳಕೆಯೂ ಆಗುವುದುಂಟು! ಪಾಕ ಬರುವಾಗ ಉಕ್ಕುವುದು ನನ್ನ ಗುಣ. ಹಾಗೆ ಉಕ್ಕಿದಾಗ ನೀರು ಹಾಕಿದರೆ ಉಕ್ಕುವುದು ಕಡಿಮೆಯಾಗುತ್ತದೆ. ಆದರೆ ಪಾಕ ಕೆಡುತ್ತದೆ. ಹಾಗೆಂದು ಉಕ್ಕಲು ಬಿಟ್ಟರೆ ಭಾರಿ ನಷ್ಟ! ಹಾಗಾಗಿ ತಳದಲ್ಲೇ ಇರುವ  ಬೂದಿಯನ್ನು ಎರಚಿದರಾಯಿತು! ಅಚ್ಚಿನ ಮಣೆಗೆ  ನಾನು ಅಂಟದಂತೆ  ಮಾಡುವುದರಲ್ಲೂ ಬೂದಿ ಸಹಕರಿಸುತ್ತದಂತೆ!

ಏನೆಲ್ಲಾ ಸರ್ಕಸ್ ಮಾಡಿದರೂ ಕೆಲವೊಮ್ಮೆ ನನ್ನ ಬಣ್ಣ ಕಪ್ಪಾಗಿಯೇ ಉಳಿಯುತ್ತದೆ. ಅಚ್ಚು ಕಟ್ಟದಿರುವುದಿದೆ. ಆಗ  ನನ್ನನ್ನು  ಮತ್ತಷ್ಟು  ಕಪ್ಪು ಪುಡಿಯಗುವಂತೆ ಮಾಡಲು ಬ್ಯಾಟರಿ ಸೆಲ್ ನ ಪುಡಿಯನ್ನು ಬಳಸುವರು.ಇಂತಹ ನನ್ನನ್ನು ಉತ್ಕೃಷ್ಟ(?)ವಾದ ಶರಾಬು ತಯಾರಿಕೆಗೆ ಬಳಸುತ್ತಾರೆ!

ಹೀಗೆ ಬಲವಂತವಾಗಿ ನನ್ನನ್ನು ಪಾಪಿಯನ್ನಾಗಿಸುತ್ತಿದ್ದಾನೆ ದುಷ್ಟ ಮಾನವ! ನನ್ನ ವ್ಯಥೆಯ ಕಥೆಯನ್ನು ಕೇಳಿದಿರಲ್ಲ? ದಯವಿಟ್ಟು ನನ್ನನ್ನು ಕಾಪಾಡಿ ಮಾನವನ ದುರಾಸೆಯ ಕಪಿ ಮುಷ್ಟಿಯಿಂದ! ಇಲ್ಲದಿದ್ದರೆ ನನ್ನ ಗತಿ?? ದಯವಿಟ್ಟು ನನ್ನನ್ನು ಉಳಿಸಿ ನೀವೂ ಉಳಿಯಿರಿ!”

ಕೇಳಿದಿರಲ್ಲ ಬೆಲ್ಲದ ವ್ಯಥೆಯ ಕಥೆ! ನೀವೇ ನಿರ್ಧರಿಸಿ . ಇಷ್ಟೆಲ್ಲಾ ಕಸರತ್ತುಗಳ ಅವಶ್ಯಕತೆ ನಮಗಿದೆಯೇ? ಇಂತಹ ಕಲುಷಿತ ಬೆಲ್ಲದ,ಇನ್ನೂ ಮುಂದುವರೆದ ರೂಪವಾದ ಸಕ್ಕರೆಯ ಬಳಕೆ ನಮಗೆ ಬೇಕೆ?

ಈ ಕಥೆಯನ್ನು ಕೇಳುತ್ತಾ ಕೇಳುತ್ತಾ ಬೆಲ್ಲದ ರೈತರ ಮೇಲೆ ಎಲ್ಲೀಲ್ಲದ ಕೋಪ ಬರುತ್ತಿರಬೇಕಲ್ಲವೇ? ಆದರೆ ಇದಕ್ಕೆಲ್ಲಾ ಕಾರಣ ನಾವು ನೀವೆಲ್ಲರೂ ಅಲ್ಲವೇ? ತಪ್ಪು ರೈತರದಲ್ಲ ಗ್ರಾಹಕರದು! ನಾಗರೀಕತೆಯ ಹೆಸರಿನಲ್ಲಿ ನೈಜತೆಯನ್ನು ಮರೆತು ಸಲ್ಲದ ಬದುಕನ್ನು ಬಾಳುವ ಬಯಕೆ ಬುದ್ಧಿವಂತಿಕೆಯೋ  ಮೂರ್ಖತನವೋ  ನಿರ್ಧರಿಸಬೇಕಾಗಿದೆ!  ರೈತರೂ ತಮ್ಮ ತಪ್ಪುಗಳನ್ನು ತಿಳಿದಿದ್ದರೂ ಸಹ ಏನು ತಾನೇ ಮಾಡಬಲ್ಲರು? ಕಪ್ಪು ಬೆಲ್ಲವನ್ನು ಮಾರಲಾಗದೆ, ಅಸಹಾಯಕನಾಗಿ ಬಿಳಿ ಬೆಲ್ಲದ ಮೊರೆಹೂಗಿದ್ದಾನೆ!

ಎಲ್ಲಿಯವರೆಗೂ ನಾವು ನಮ್ಮ ವಿದ್ಯೆಯನ್ನು, ಬುದ್ಧಿಯನ್ನು ಗೌರವಿಸುವುದಿಲ್ಲವೋ ಅಲ್ಲಿಯವರೆಗೂ ಇಂತಹ ಕಾರ್ಯಗಳು ನಡೆಯುತ್ತಲೇ ಇರುತ್ತವೆ!

ಜಾಹೀರಾತಿನ ಜಾಡ್ಯದಿಂದ ದೂರ ಸರಿದು ನಮ್ಮ ಆಹಾರವನ್ನು ನಾವೇ ತಯಾರಿಸುವಂತಾಗಿ, ನಮ್ಮ ರೈತರನ್ನು, ನಮ್ಮ ಉತ್ಪಾದಕರನ್ನು ನಾವು ಪ್ರೀತಿಸುವನ್ತಾಗಬೇಕು!ಆಗ ಮಾತ್ರ ನಮ್ಮ ಜನ ನಮ್ಮ ಹಿತಚಿಂತನೆ ಮಾಡಲು ಸಾಧ್ಯ!

ಪ್ರೀತಿಯೊಂದೆ ಶಾಶ್ವತ. ಪ್ರೀತಿಯೊಂದೆ ಸಕಲ ಲೋಕೊಪಕಾರಕ! ಪ್ರೀತಿಸಿ ಪ್ರೀತಿಯನ್ನು ಪಡೆಯಿರಿ! ಆಗ ಯಾರು ಯಾರಿಗೆ ತಾನೇ ದ್ರೋಹ ಮಾಡಿಯಾರು? ಎಲ್ಲರೂ ತಮ್ಮವರೇ ಎಂಬ ಭಾವನೆಯಿದ್ದಾಗ ಯಾರೂ ಯಾರಿಗೂ ಅನ್ಯಾಯ ಮಾಡಲಾರರು! ಪ್ರೀತಿಯೇ ದೇವರು!

ಏಳಿ ಎದ್ದೇಳಿ!! ಇನ್ನಾದರೂ ಎಚ್ಚೆತ್ತುಕೊಳ್ಳಿ!! ಸರ್ವನಾಶದೆಡೆಗೆ ಸಾಗುತ್ತಿರುವ ಜಗತ್ತನ್ನು ರಕ್ಷಿಸಿ! ಬನ್ನಿ ಅಕ್ಕ ತಂಗಿಯರೇ, ಅಣ್ಣ ತಮ್ಮಂದಿರೆ!! ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಸಾಗಿ ಭುಮಿತಾಯಿಯನ್ನು, ಅವಳ ಪ್ರತಿನಿಧಿಯಾದ ಭಾರತಮಾತೆಯನ್ನು ಉಳಿಸೋಣ!

ಸರ್ವೇ ಜನಾ: ಸುಖಿನೋ ಭವಂತು! ಸಕಲ ಸನ್ಮಂಗಳಾನಿ ಭವಂತು!!

Advertisements

One Comment Add yours

 1. “Worlds Biggest Dustbin is Human’s Stomach” . Its really a phenomenon that are made to survive even after eating all those garbages & poison. “vaataapi jeerno bhava:..” We need to think!

  Like

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s